KANNADA

ವಸಾಹತುಶಾಹಿಯ ಆಳ್ವಿಕೆಯ ಕಾಲದಿಂದಲೂ ಭಾರತದ ರಂಗಭೂಮಿ ಕಲಾವಿದರು ತಮ್ಮ ನಾಟಕಗಳ ಮೂಲಕ ದೇಶದ ಬಹುತ್ವವನ್ನು ಮೆರೆದಿದ್ದಾರೆ.ನಾವು ಭಾರತದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ನಾಟಕಗಳನ್ನು ಮಾಡಿದ್ದೇವೆ.ನಾಟಕಗಳ ಮೂಲಕ ಸಾಮಾಜಿಕ ಪಿಡುಗುಗಳನ್ನು ವಿರೋಧಿಸಿದ್ದೇವೆ.ನಾವು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದ್ದೆವು.ಪುರುಷಪ್ರಧಾನ ವ್ಯವಸ್ಥೆ,ಬ್ರಾಹ್ಮಣವಾದ ಮತ್ತು ಜಾತಿ ದೌರ್ಜನ್ಯದ ವಿರುದ್ದ ಬಲವಾದ ಪ್ರಹಾರವನ್ನು ನೀಡಿದ್ದೇವೆ.ಧಾರ್ಮಿಕ ಪ್ರತ್ಯೇಕತಾವಾದ,ಅಂಧ ದೇಶಾಭಿಮಾನ,ಸಂಕುಚಿತ ಭಾವನೆ,ಅವೈಚಾರಿಕತೆ ಮುಂತಾದವುಗಳ ವಿರುದ್ಧ ನಿಂತಿರುವ ಹೆಮ್ಮೆಯ ಧೀರ್ಘಕಾಲದ ಪರಂಪರೆ ರಂಗಭೂಮಿಯ ಕಲಾವಿದರಿಗಿದೆ.ನಾವು ಅಂಚಿನಲ್ಲಿ ನಿಂತು ಮಾತಾಡಿದ್ದೇವೆ.ಅಂಚಿನ ಆಕಡೆಗೂ ಮಾತಾಡಿದ್ದೇವೆ.ಕಳೆದ ನೂರೈವತ್ತು ವರ್ಷಗಳಿಂದ ಹಾಡು ಮತ್ತು ನೃತ್ಯಗಳೊಂದಿಗೆ,ಹಾಸ್ಯ ಮತ್ತು ಶೋಕಗಳೊಂದಿಗೆ ಹೇಳಲೇ ಬೇಕಾದ ಜನಗಳ ಕತೆಗಳನ್ನು ಹೇಳುತ್ತಾ ಜಾತ್ಯಾತೀತ,ಪ್ರಜಾಪ್ರಭುತ್ವವಾದಿ ಹಾಗೂ ಎಲ್ಲರನ್ನು ಒಳಗೊಳ್ಳುವ ನ್ಯಾಯಬದ್ಧ ಭಾರತದ ಕಲ್ಪನೆಯನ್ನು ಕಟ್ಟುತ್ತಾ ನಾವು ಮುನ್ನಡೆದಿದ್ದೇವೆ.

     ಇಂದು ಅಂತಹ ಭಾರತದ ಕಲ್ಪನೆ ಬೆದರಿಕೆಗೊಳಗಾಗಿದೆ.ಹಾಡುಗಳು,  ನೃತ್ಯಗಳು,ನಗು ಇವೆಲ್ಲವೂ ಕೂಡ ಬೆದರಿಕೆಗೊಳಪಟ್ಟಿವೆ.ಇಂದು ನಮ್ಮ ಪ್ರೀತಿಯ ಸಂವಿಧಾನಕ್ಕೆ ಬೆದರಿಕೆ ಒಡ್ಡಲಾಗಿದೆ.ಯಾವ ಸಂಸ್ಥೆಗಳು ಇಂದು ಚರ್ಚೆ,ಸಂವಾದ,ಬಿನ್ನಾಭಿಪ್ರಾಯಗಳನ್ನು ಪ್ರೋತ್ಸಾಹಿಸಬೇಕಾಗಿತ್ತೋ ಅಂತಹ ಸಂಸ್ಥೆಗಳಲ್ಲಿ ಉಸಿರು ಕಟ್ಟುವ ವಾತಾವರಣವಿದೆ.ಸತ್ಯವನ್ನಾಡುವುದು,ಸುಳ್ಳುಗಳನ್ನು ಬಹಿರಂಗಗೊಳಿಸುವುದು,ಪ್ರಶ್ನಿಸುವುದು ಇವೆಲ್ಲದಕ್ಕೂ ದೇಶದ್ರೋಹದ ಹಣೆಪಟ್ಟಿ ಹಚ್ಚಲಾಗುತ್ತಿದೆ. ನಾವು ಸೇವಿಸುವ ಆಹಾರ,ನಾವು ಮಾಡುವ ಪ್ರಾರ್ಥನೆಗಳು,ನಮ್ಮ ಹಬ್ಬಗಳು ಇಲ್ಲೆಲ್ಲಾ ಕೂಡ ದ್ವೇಷದ ಬೀಜದ ಆಗಮನವಾಗಿದೆ.

        ನಮ್ಮ ದೈನಂದಿನ ಬದುಕಿನೊಳಗೆ ಈ ದ್ವೇಷದ ಹನಿಗಳು ತೊಟ್ಟಿಕ್ಕಲಾರಂಭಿಸಿವೆ.ಇದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆ ಯಾಗಿದೆ. ಇದು ನಿಲ್ಲಬೇಕು.

      ಸ್ವತಂತ್ರ ಭಾರತದ ಇತಿಹಾಸದಲ್ಲೇ ಮುಂಬರುವ ಚುನಾವಣೆಯು ತುಂಬಾ ಸಂದಿಗ್ಧ ಪರಿಸ್ಥಿತಿಯಲ್ಲಿ ನಡೆಯುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ಪ್ರಜಾಪ್ರಭುತ್ವವು ಅಶಕ್ತರನ್ನು,ಅಂಚಿಗೆ ತಳ್ಳಲ್ಪಟ್ಟವರನ್ನು ಸಬಲೀಕರಣಗೊಳಿಸಬೇಕು.ಸಂವಾದಗಳಿಲ್ಲದೆ,ಪ್ರಶ್ನಿಸದೆ,ಸಕ್ರಿಯ ವಿರೋಧಗಳಿಲ್ಲದೆ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇಂದಿನ ಸರಕಾರ ಇವೆಲ್ಲವನ್ನೂ ವ್ಯವಸ್ಥಿತವಾಗಿ ನಾಶಮಾಡುತ್ತಿದೆ.ಐದು ವರ್ಷಗಳ ಹಿಂದೆ ಅಭಿವೃದ್ಧಿಯ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದ್ವೇಷ ಮತ್ತು ದೊಂಬಿಯ ರಾಜಕಾರಣದಲ್ಲಿ ತೊಡಗಲು ಹಿಂದುತ್ವ ಗೂಂಡಾ ಪಡೆಗಳಿಗೆ ಮುಕ್ತ ಅವಕಾಶ ನೀಡಿದೆ.ಐದು ವರ್ಷಗಳ ಹಿಂದೆ ದೇಶವನ್ನು ರಕ್ಷಿಸುವವನೆಂದು ಬಿಂಬಿಸಲ್ಪಟ್ಟ ವ್ಯಕ್ತಿ ತನ್ನ ನೀತಿಗಳಿಂದಾಗಿ ಮಿಲಿಯಾಂತರ ಜನರ ಬದುಕನ್ನು ನಾಶಮಾಡಿದ್ದಾರೆ.ಅವರು ಕಪ್ಪು ಹಣವನ್ನು ವಾಪಸ್ ತರುತ್ತೇನೆಂದು ಬರವಸೆ ನೀಡಿದ್ದರು.ಆದರೆ ಖದೀಮರು ದೇಶವನ್ನೇ ಕೊಳ್ಳೆ ಹೊಡೆದು ಓಡಿಹೋದರು.ಶ್ರೀಮಂತರ ಆಸ್ತಿ ಬಾನೆತ್ತರಕ್ಕೆ ಬೆಳೆಯುತ್ತಿದ್ದರೆ ಬಡವರು ಮತ್ತೂ ಬಡವರಾಗುತ್ತಿದ್ದಾರೆ.

         ದೇಶದ ಸಂವಿಧಾನವನ್ನು ಮತ್ತು ಬಹುತ್ವದ ಜಾತ್ಯಾತೀತ ಪರಂಪರೆಯನ್ನು ರಕ್ಷಿಸಬೇಕೆಂದು ನಾಡಿನ ಜನತೆಗೆ ಈ ದೇಶದ ರಂಗಭೂಮಿ ಕಲಾವಿದರಾಗಿರುವ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ.ತಾವು ಪ್ರೀತಿಗೆ,ಸಹನೆಗೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮತನೀಡಿ ಅನಾಗರಿಕ ಕರಾಳ ಶಕ್ತಿಗಳನ್ನು ಸೋಲಿಸಬೇಕೆಂದು ಸಹ ನಾಗರಿಕ ಬಂಧುಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ .

ನಮ್ಮ ಮನವಿ: ಅಸಹಿಷ್ಣುತೆ,ದ್ವೇಷಗಳನ್ನು ಬಿತ್ತುವ ಸಂವೇದನಾರಹಿತರ ವಿರುದ್ಧ ಮತ ನೀಡಿ ಪದಚ್ಯುತಗೊಳಿಸಿ.ಬಿಜೆಪಿ ಮತ್ತು ಅವರ ಕೂಟದ ವಿರುದ್ಧ ಮತ ನೀಡಿ.ವೈಜ್ಞಾನಿಕ ಚಿಂತನೆಯನ್ನು ಬೆಳೆಸಲು ,ಪರಿಸರದ ರಕ್ಷಣೆಗಾಗಿ , ಅಶಕ್ತರನ್ನು ಸಬಲೀಕರಣಗೊಳಿಸಲು,ಸ್ವಾತಂತ್ರ್ಯವನ್ನು ಕಾಪಾಡಲು ಮತನೀಡಿ.ಜಾತ್ಯಾತೀತ ಪ್ರಜಾಪ್ರಭುತ್ವ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತಕ್ಕಾಗಿ ಮತನೀಡಿ. ಕನಸು ಕಾಣುವ ಸ್ವಾತಂತ್ರ್ಯಕ್ಕಾಗಿ ಮತನೀಡಿ.    ಬುದ್ಧಿವಂತಿಕೆಯಿಂದ ಮತ ಚಲಾಯಿಸಿ.

Are you a theatre artist? Like to endorse the statement?
Name and Place:

Your Email: (required)

Your theatre credentials and other details : (required)